ಶೇಷಗಿರಿ ಹಾನಗಲ್ಲ - 
ಹಾನಗಲ್ಲ ಮನೆತನ ಒಂದು ಪ್ರಸಿದ್ಧ ಸಂಗೀತ ಮನೆತನ. ಶೇಷಗಿರಿ ಹಾನಗಲ್ಲ ಜನಿಸಿದ್ದು ಅಕ್ಟೋಬರ 10, 1922. ತಂದೆ ಕೃಷ್ಣರಾವ, ತಾಯಿ ಗೌರಮ್ಮ. ಪ್ರಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ಲರು ಶೇಷಗಿರಿ ಹಾನಗಲ್ಲ ಅವರಿಗೆ ಸೋದರ ಸಂಬಂಧಿ. ಗಂಗೂಬಾಯಿಯವರ ತಾಯಿ ಅಂಬಾಬಾಯಿ. ರಾಮಣ್ಣ ಹಾನಗಲ್ಲ ಚಿಕ್ಕಪ್ಪ. ಒಬ್ಬ ದೊಡ್ಡ ವಕೀಲರಲ್ಲಿ ಕಾರಕೂನರಾಗಿದ್ದ ಕೃಷ್ಣರಾಯರಿಗೆ ಸಂಗೀತದಲ್ಲಿ ಆಸಕ್ತಿ. ಕರ್ನಾಟಕಿ ಶೈಲಿಯಲ್ಲಿ ತಬಲಾ ನುಡಿಸುತ್ತಿದ್ದರು. ಬಹಳ ಅಪರೂಪದ ಸಂಗತಿ. ರಾಮಣ್ಣ ಕೂಡ ಹಿಂದುಸ್ತಾನಿ ಶೈಲಿಯಲ್ಲಿ ತಬಲಾ ನುಡಿಸುತ್ತಿದ್ದರು. ಮೇಲಾಗಿ, ಸಂಗೀತ ಬಲ್ಲವರು. ಅವರದೆಲ್ಲ ಸಂಯುಕ್ತ ಸಂಸಾರ. ಕೃಷ್ಣರಾವರು ಕುಟುಂಬದ ಹಿರಿಯ. ಬಿಗಿ ಶಿಸ್ತಿನ ಮನುಷ್ಯ. ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿಯಿರಲಿಲ್ಲ. ಹಾಗಾಗಿ, ಶೇಷಗಿರಿಗೆ ತಂದೆಯಿಂದ ಯಾವುದೆ ಉತ್ತೇಜನ ದೊರೆಯಲಿಲ್ಲ. ಆದರೆ ಗಂಗೂಬಾಯಿ ಮತ್ತು ರಾಮಣ್ಣ ಅವರಿಗಿದ್ದ ಹಿಂದುಸ್ತಾನಿ ಸಂಗೀತದ ಪ್ರೀತಿ ಶೇಷಗಿರಿ ಮೇಲೆ ಗಾಢ ಪರಿಣಾಮ ಬೀರಿತು.
ಮುಂದೆ, ಕುಟುಂಬ ಧಾರವಾಡದಿಂದ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿತು. ಶೇಷಗಿರಿಯಲ್ಲಿ ಸುಪ್ತವಾಗಿದ್ದ ಸಂಗೀತಾಸಕ್ತಿ ಚಿಗುರೊಡೆಯಿತು. ಗಂಗೂಬಾಯಿ ಪ್ರ್ಯಾಕ್ಚಿಸ್ ಮಾಡುವಾಗ ರಾಮಣ್ಣ ತಬಲಾ ಸಾಥ ನೀಡುತ್ತಿದ್ದರು. ಆಗ ಮನೆಯಲ್ಲಿ ಹಾರ್ಮೋನಿಯಮ್ ಖಾಲಿ ಬಿದ್ದಿರುತ್ತಿತ್ತು. ಶೇಷಗಿರಿ ಅದರ ಮೇಲೆ ಬೆರಳಾಡಿಸತೊಡಗಿದರು ಬಹುಶಃ ಅದನ್ನೆ ಕಲಿಯುತ್ತಿದ್ದೆರೇನೊ. ಆದರೆ, ಅದು ಪಾಶ್ಚಿಮಾತ್ಯ ವಾದ್ಯವಾಗಿದ್ದು ಭಾರತೀಯ ಸಂಗೀತಕ್ಕೆ ತಕ್ಕುದಲ್ಲ ಎಂಬ ಕಾರಣಕ್ಕಾಗಿ ಆಕಾಶವಾಣಿ ಅದನ್ನು ನಿಷೇಧಿಸಿತ್ತು. ಹಾರ್ಮೋನಿಯಮ್‍ಗೆ ಭವಿಷ್ಯವಿಲ್ಲವೆಂದು ಶೇಷಗಿರಿ ಅದನ್ನು ಕೈಬಿಟ್ಟರು ವಾಯಲಿನ್‍ಗೆ ಕೈಯಿಟ್ಟರು ತರುವಾಯ ಹೆಂಡತಿಯಾಗಲಿದ್ದ ಶಾಂತಾಬಾಯಿಯ ತಂದೆ ಮಲ್ಲಣ್ಣ ಗುರು. ಆಗಾಗ ಇವರ ಮನೆಗೆ ಬಂದಾಗ ಪಾಠ. ಸರಳೆ, ಜಂಟಿ ಅಭ್ಯಾಸ. ಮಲ್ಲಣ್ಣನವರ ಅಕಾಲಿಕ ಮರಣದಿಂದಾಗಿ ಕಲಿಕೆ ನಿಂತಿತು.

ತದನಂತರ ಶೇಷಗಿರಿ ವಜೀರಖಾನರಿಂದ ಸಿತಾರ ಕಲಿಯತೊಡಗಿದರು. ಇವರ ಮನೆಗೆ ಬಂದು ಕಲಿಸುವುದು ವಜೀರಖಾನರಿಗೆ ಅನುಕೂಲವಾಗಲಿಲ್ಲ. ಪೆÇೀಲಿಯೊ ಪೀಡಿತ ಕಾಲುಗಳನ್ನು ಹೊತ್ತುಕೊಂಡು ಶೇಷಗಿರಿಗೂ ಗುರುಗಳ ಮನೆಗೆ ಹೋಗಲಾಗಲಿಲ್ಲ. ಸಿತಾರ ಪಾಠವೂ ನಿಂತಿತು. ಜೀವನೋಪಾಯಕ್ಕೋಸ್ಕರ ಕಟ್ಟಿಗೆ ಅಡ್ಡೆ ನಡೆಸು. ಕೂತುಕೊಂಡೆ ಅದನ್ನು ನಿಭಾಯಿಸಬಹುದುú ಎಂದು ಕಕ್ಕ ರಾಮಣ್ಣನವರ ಸಲಹೆ. ಶೇಷಗಿರಿಗೆ ಇಷ್ಟವಿರಲಿಲ್ಲ. ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಕಲಿಯಲಾರಂಬಿsಸಿದರು. ಪ್ರಗತಿ ಸಾಧಿಸಿದರು. ಆದರೆ, ಕಲೆಯ ಆಕರ್ಷಣೆ ಜೋರಾಯಿತು. ರಾಘವೇಂದ್ರ ಚವಟೆ ಅವರಿಂದ ಶಿಲ್ಪಕಲೆ ಕಲಿಯಲು ಶುರು ಮಾಡಿದರು. ಅದರಲ್ಲಿ ಎಷ್ಟೇ ಆಸ್ಥೆಯಿದ್ದರೂ ದೈಹಿಕ ಅಶಕ್ತತೆ ಅಡ್ಡಬಂತು.

ಮುಂದೇನು? ಶಾಸ್ತ್ರೀಯ ಸಂಗೀತ, ಲಘು ಸಂಗೀತ, ನಾಟಕ, ನೃತ್ಯ ಎಲ್ಲದಕ್ಕೂ ಅತ್ಯಗತ್ಯವಾದ ತಬಲಾ ಏಕೆ ಕಲಿಯಬಾರದು? ಕಕ್ಕ ನುಡಿಸುವಾಗ ಕೇಳುತ್ತ ಕೇಳುತ್ತ ಶೇಷಗಿರಿ ಠೇಕಾ ನುಡಿಸಲು ಕಲಿತರು. ಅದೇ ಕಾಲಕ್ಕೆ ಮುಂಬಯಿಯ ನಾರಾಯಣರಾವ ಇಂದೋರಕರ ಮತ್ತು ಪುಣೆಯ ಲಾಲಜಿ ಗೋಖಲೆ ಅವರ ಸಂಪರ್ಕ ಬಂತು. ಅವರಿಬ್ಬರೂ ಶ್ರೇಷ್ಠ ತಬಲಗಳು. ಗಂಗೂಬಾಯಿ ಹಾನಗಲ್ಲರಿಗೆ ತಬಲಾ ಸಾಥ ನೀಡಲು ಬರುತ್ತಿದ್ದರು. ಶೇಷಗಿರಿಯ ತಬಲಾವಾದನದಲ್ಲಿ ಇದ್ದ ಆಸಕ್ತಿ ಕಂಡು ಇಬ್ಬರೂ ಕಲಿಸಲು ಮುಂದಾದರು. ಶೇಷಗಿರಿ ದಿನಾಲು ಎಂಟು ತಾಸು ಪ್ರ್ಯಾಕ್ಟಿಸ್ ಮಾಡಿದರು. ಅನತಿ ಕಾಲದಲ್ಲಿ ಗಂಗೂಬಾಯಿ ಹಾನಗಲ್ಲರಿಗೆ ಸಾಥ ನೀಡುವಷ್ಟು ಪರಿಣತಿ ಸಂಪಾದಿಸಿದರು.ಗಂಗೂಬಾಯಿ ಹಾನಗಲ್ಲರ ಕಚೇರಿಗಳಿದ್ದ ಕಡೆಗೆಲ್ಲ ತಬಲಾ ಸಾಥ್‍ಗೆ ಹೋಗತೊಡಗಿದರು. ಇಂಥ ಕಚೇರಿ ಪಯಣಗಳಲ್ಲಿ ಮೇಲಿಂದ ಮೇಲೆ ಮುಂಬಯಿಗೆ ಹೋಗುವುದಿತ್ತು. ಈ ಸಂದರ್ಭಗಳ ಸದುಪಯೋಗ ಪಡೆದು ಶೇಷಗಿರಿ ಈರ್ವರೂ ಗುರುಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.

ಪಂಡಿತ ನಾರಾಯಣರಾವ ಇಂದೋರಕರರು ಪದ್ಮಭೂಷಣ ಉಸ್ತಾದ ಜಹಾಂಗೀರಖಾನರ ಶಿಷ್ಯ. ಜಹಾಂಗೀರಖಾನರು ಪೂರಬ ಘರಾಣಾದ ಹಿರಿಯ ತಬಲಾ ಪ್ರಭು. ನಾರಾಯಣರಾವ ದಿಲ್ಲಿ ಘರಾಣೆಯ ಉಸ್ತಾದ ಗಾಮೇಖಾನರ ಶಿಷ್ಯ ಕೂಡ. ಪಂಡಿತ ಲಾಲಜಿ ಗೋಖಲೆ ಉಸ್ತಾದ ಅಹಮ್ಮದಜಾನ ತಿರಕವಾ ಅವರ ಶಿಷ್ಯ. ಶೇಷಗಿರಿ ಅವರ ತಬಲಾ ಕಲೆ ಇವರೀರ್ವರ ಮಾರ್ಗದರ್ಶನದಲ್ಲಿ ಅರಳಿದುದು ಸಹಜವೆ. ಹಾಗಾಗಿ, ಶೇಷಗಿರಿ ಹಾನಗಲ್ಲ ಅವರ ತಬಲಾವಾದನ ದಿಲ್ಲಿ, ಪೂರಬ, ಫರೂಕಾಬಾದ ಘರಾಣೆಗಳ ವೈಶಿಷ್ಟ್ಯಗಳ ಸಂಗಮವಾಗಿದೆ. ಶೇಷಗಿರಿ ಹಾನಗಲ್ಲ ಅವರದು ಯಾವೊಬ್ಬ ಕಲಾವಿದ ಬೇರೆ ಘರಾಣೆಗಳಲ್ಲಿ ಉತ್ತಮವಾದುದನ್ನು ಅಳವಡಿಸಿಕೊಳ್ಳಬೇಕೆಂಬ ಮುಕ್ತ ಮನೋಭಾವ.

ಅಂದಿನ ಕಾಲದಲ್ಲಿ ಆಕಾಶವಾಣಿಯೊಂದೇ ಸಮೂಹ ಮಾಧ್ಯಮವಾಗಿತ್ತು. 50 ನಿಮಿಷ ತಬಲಾ ಸೋಲೋ ನುಡಿಸುವ ಅವಕಾಶ ಮುಂಬಯಿ ಆಕಾಶವಾಣಿ ಕೇಂದ್ರದಿಂದ 1949ರಲ್ಲಿ ಒದಗಿಬಂತು. ಹೊಸಬರಿಗೆ ವಿರಳ ಅವಕಾಶ. ಶೇಷಗಿರಿ ಝಪತಾಲ ಮತ್ತು ತೀನತಾಲ ಪ್ರಸ್ತುತ ಪಡಿಸಿದರು. ವಿನಾಯಕರಾವ ಘ್ರಾಂಘ್ರೇಕರ ಝಪತಾಲ ನುಡಿಸುವಲ್ಲಿ ಎಷ್ಟೊಂದು ಪರಿಣತರಾಗಿದ್ದರೆಂದರೆ ಝಪತಾಲ ಕೇಳಿದರೆ ಅವರಿಂದಲೇ ಕೇಳಬೇಕು ಎಂಬ ಪ್ರತೀತಿ ಬೇರೂರಿತ್ತು. ಶೇಷಗಿರಿ ಹಾನಗಲ್ಲ ಅವರ ಸೋಲೋ ಕೇಳಿ ವಿನಾಯಕರಾವ ಘಾಂಘ್ರೇಕರ ಮೆಚ್ಚುಗೆ ಸೂಚಿಸಿದರು. ಅದೊಂದು ಶೇಷಗಿರಿ ಅವರ ಕಿರೀಟದಲ್ಲಿ ಹೊಸ ಗರಿ. ಆ ತಬಲಾ ಸೋಲೋ ಕಾರ್ಯಕ್ರಮ ಎಷ್ಟೊಂದು ಪ್ರಭಾವ ಬೀರಿತೆಂದರೆ ಅದೇ ವರ್ಷ ಮುಂಬಯಿಯ ರಾಮನಾರಾಯಣ ರುಯಿಯಾ ಕಾಲೇಜಿನ ಸಂಗೀತ ಸಮ್ಮೇಳನದಲ್ಲಿ ಸೋಲೋ ನುಡಿಸಲು ಆಹ್ವಾನ ಬಂತು.

 ಶೇಷಗಿರಿ ಹಾನಗಲ್ಲ ಅವರ e್ಞÁನದಾಹ ತಣಿಸಲಾರದ್ದು. ನಾರಾಯಣರಾವ ಇಂದೋರಕರರಿಂದ ಕಲಿಯಲೋಸುಗ ಮುಂಬಯಿಗೆ ತೆರಳಿದರು. ನಾರಾಯಣರಾವ ಇಂದೋರಕರರ ಗಂಡಾಬಂಧನ ಸಮಾರಂಭ 1950ರಲ್ಲಿ ಹುಬ್ಬಳ್ಳಿಯಲ್ಲಿ ಜರುಗಿತು. ನಟಸಾಮ್ರಾಟ ಬಾಲಗಂಧರ್ವರ ಉಪಸ್ಥಿತಿಯಿಂದ ಸ್ಮರಣಾರ್ಹವಾಯಿತು. ಮೃದು ಹೃದಯಿ ನಾರಾಯಣರಾವ ಪ್ರೀತಿಯಿಂದ ಕಲಿಸಿದರು. ಕಲಿಸುವಾಗ ಹಾರ್ಮೋನಿಯಮ್‍ನಲ್ಲಿ ಲೆಹರಾ ಸ್ವತಃ ಹಿಡಿಯುತ್ತಿದ್ದರು.

 ಶೇಷಗಿರಿ ಹಾನಗಲ್ಲ ಅವರದು ಸೋಲೋ ಮತ್ತು ಸಾಥ ಎರಡರಲ್ಲೂ ಸಮಾನ ಪ್ರಭುತ್ವ. ಶಾಸ್ತ್ರೀಯ ಹಾಗೂ ಲಘು ಸಂಗೀತ ಎರಡರಲ್ಲೂ ಸರಾಗತೆ. ಗಾಯನ ಯಾ ವಾದನ ಯಾವುದೆ ಇರಲಿ. ಧಾರವಾಡದ ಗ್ವಾಲಿಯರ ಘರಾಣೆಯ ಗಾಯಕ ಗುರುರಾವ ದೇಶಪಾಂಡೆ “ಶೇಷಗಿರಿ ಹಾನಗಲ್ಲ ಅವರ ತಬಲಾವಾದನ ಕಲ್ಲುಸಕ್ಕರೆಯಂತೆ. ಯಾವ ಬದಿಯಿಂದ ಕಡಿದರೂ ಸಿಹಿ” ಎಂದು ವಿಮರ್ಶಿಸಿದ್ದಾರೆ. ಶೇಷಗಿರಿ ಹಾನಗಲ್ಲ ಭಾರತದಾದ್ಯಂತ ಆಕಾಶವಾಣಿ ಕೇಂದ್ರಗಳಲ್ಲಿ ತಬಲಾ ಕಾರ್ಯಕ್ರಮ ನೀಡಿದ್ದಾರೆ. ಹತ್ತು ಹಲವು ಸಂಗೀತ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಗಂಗೂಬಾಯಿ ಹಾನಗಲ್ಲ ಅವರಿಗಂತೂ ಸರಿಯೆ. ಆದರೆ, ಶೇಷಗಿರಿ ಹಾನಗಲ್ಲ ತಬಲಾ ಸಾಥ ನೀಡಿದ ಸಂಗೀತಗಾರರ ಪಟ್ಟಿ ಅಂತ್ಯವಿಲ್ಲದ್ದು ನಾಡಿನ ಹಿರಿಯ ಗಾಯಕರು, ಸಿತಾರ, ವಯಾಲಿನ್, ಹಾರ್ಮೊನಿಯಂ ಸೇರಿದಂತೆ ನಾಲ್ಕು ತಲೆಮಾರಿನ ಸಂಗೀತಗಾರರಿಗೆ ಸಾಥ ನೀಡಿದ ಶ್ರೇಯಸ್ಸು ಶೇಷಗಿರಿ ಹಾನಗಲ್ಲ ಅವರದು.

ಶೇಷಗಿರಿ ಹಾನಗಲ್ಲ ಅವರದು ಆವಿಷ್ಕಾರಕ ಮನಸ್ಸು. ಬೇರೆ ಬೇರೆ ತಾಲಗಳಲ್ಲಿ ಅವರು ಕಾಯದಾ, ಚಕ್ರದಾರ ಗತ್‍ಗಳನ್ನು ರಚಿಸಿರುವರು. ಗಂಗೂಬಾಯಿ ಹಾನಗಲ್ಲ ಗೌರವಾರ್ಥವಾಗಿ ಗಂಗಾಚಲನ ರಚಿಸಿರುವರು. ಇಂದಿರಾ ಗಾಂದಿs 1965-66ರಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದಾಗ ಆಕಾಶವಾಣಿಯ ನಿಲಯ ಕಲಾವಿದರ ಸೇವಾ ಸ್ಥಿತಿಗಳನ್ನು ಸುಧಾರಿಸಿದರು. ಕೃತಜ್ಞತಾರ್ಥವಾಗಿ ಶೇಷಗಿರಿ ಹಾನಗಲ್ಲ ಒಂಬತ್ತೂವರೆ ಮಾತ್ರಗಳ ಇಂದಿರಾ ತಾಲ ರಚನೆ ಮಾಡಿರುವರು.

ಶೇಷಗಿರಿ ಹಾನಗಲ್ಲ ಅವರಿಗೆ ಹಲವು ಗೌರವಗಳು ಪ್ರಾಪ್ತವಾಗಿವೆ.: 1981ರಲ್ಲಿ ಕುಂದಗೋಳದ ಸವಾಯಿ ಗಂಧರ್ವ ಪ್ರತಿಷ್ಠಾನ ವರ್ಷದ ಕಲಾವಿದ ಎಂಬ ಬಿರುದು ನೀಡಿ ಸನ್ಮಾನಿಸಿದೆ. 1982ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾ ತಿಲಕ ಪ್ರಶಸ್ತಿ, 1992ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1999ರಲ್ಲಿ ಒಂದು ಲಕ್ಷ ರೂಪಾಯಿಯ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ